You are here
Home > Crime News > ಧಾರಾಕಾರ ಮಳೆಗೆ ಲಾರಿಗಳು ಪಲ್ಟಿ- ಕೊಚ್ಚಿ ಹೋದ ಕಾರುಗಳು

ಧಾರಾಕಾರ ಮಳೆಗೆ ಲಾರಿಗಳು ಪಲ್ಟಿ- ಕೊಚ್ಚಿ ಹೋದ ಕಾರುಗಳು

ಬಳ್ಳಾರಿ: ಆಂಧ್ರ ಸೇರಿದಂತೆ ಬಳ್ಳಾರಿ ಗಡಿಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಸೇತುವೆಯ ಮೇಲೆ ತಡೆ ಗೋಡೆ ಇಲ್ಲದ ಕಾರಣ ರಸ್ತೆ ಕಾಣದೆ ಎರಡು ಲಾರಿ ಒಂದು ಬಸ್ ಪಲ್ಟಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬಸ್ ಬೀಳುತ್ತಿದ್ದಂತೆ ಸ್ಥಳೀಯರು ಪ್ರಯಾಣಿಕರನ್ನು ಪಾರು ಮಾಡಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಆಂಧ್ರ ಮತ್ತು ಕರ್ನಾಟಕ ಸಂಪರ್ಕ ಸೇತುವೆಯಾದ ರಾರಾವಿ ಸೇತುವೆಗೆ ತಡೆಗೋಡೆ ನಿರ್ಮಿಸಲು ಮಾತ್ರ ಮೀನಾಮೇಷ ಏಣಿಸುತ್ತಿದ್ದಾರೆ.

ಅನೇಕ ವರ್ಷಗಳಿಂದ ಇದೇ ಸ್ಥಳದಲ್ಲಿ ಮಳೆ ಬಂದರೆ ಸಾಕು ಹಲವಾರು ಅನಾಹುತಗಳಾಗಿವೆ. ಕಳೆದ ಏಳು ವರ್ಷಗಳಿಂದ ಕುಂಟುತ್ತಾ ಸೇತುವೆ ಕಾಮಗಾರಿ ಕೆಲಸ ನಿರ್ಮಾಣ ಸಾಗುತ್ತಿದೆ. ಇಬ್ಬರು ಮುಖ್ಯಮಂತ್ರಿಗಳು ಭೂಮಿಪೂಜೆ ಮಾಡಿದ್ದರು. ಸಹ ಸೇತುವೆ ಕಾಮಗಾರಿ ಮಾತ್ರ ಮುಕ್ತಾಯ ಹಂತಕ್ಕೆ ತಲುಪಿಲ್ಲ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನೂ ಚಿಕ್ಕೋಡಿ ತಾಲೂಕಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಎಕ್ಸಂಬಾ ಪಟ್ಟಣದಲ್ಲಿ ಮಳೆ ನೀರಿಗೆ ಒಂದು ಟ್ರಾಕ್ಟರ್ ಮೂರು ಕಾರುಗಳು ಕೊಚ್ಚಿ ಹೋಗಿವೆ. ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಕಾರುಗಳನ್ನು ನಿಲ್ಲಿಸಲಾಗಿತ್ತು. ಆದರೆ ಕಳೆದ ದಿನ ಸುರಿದ ಮಳೆಗೆ ಕಾರ್ ಕೊಚ್ಚಿಕೊಂಡು ಹೋಗಿದೆ. ಮಳೆ ನೀರಿಗೆ ಸುಮಾರು 200 ಮೀಟರ್ ನಷ್ಟು ದೂರ ಕೊಚ್ಚಿಕೊಂಡು ಹೋಗಿವೆ. ಆದರೆ ಮಳೆರಾಯನ ಅಬ್ಬರಕ್ಕೆ ರೈತರು ಫುಲ್ ಖುಷಿಯಾಗಿದ್ದು, ಕಾರು, ಟ್ರಾಕ್ಟರ್ ಹೋದರೆ ಹೋಗಲಿ ಮಳೆಯಾಯಿತು ಎಂದು ಜನರು ಸಂತಸ ಪಡುತ್ತಿದ್ದಾರೆ.

ಇತ್ತ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಕಲ್ಲೂರ ಗ್ರಾಮದ ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನ ಅದನ್ನು ನೋಡಲು ಇದೀಗ ಬ್ರಿಡ್ಜ್ ನತ್ತ ಹೋಗುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಈ ಪ್ರಮಾಣದ ಮಳೆ ಬಂದಿರುವುದರಿಂದ ರೈತಾಪಿ ವರ್ಗ ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

**

Leave a Reply

Top