You are here
Home > Political News > ಸಂಸದರಿಂದ ಏನೂ ಮಾಡಲು ಸಾಧ್ಯವಿಲ್ಲ- ಸುಮಲತಾ

ಸಂಸದರಿಂದ ಏನೂ ಮಾಡಲು ಸಾಧ್ಯವಿಲ್ಲ- ಸುಮಲತಾ

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಜನರಿಗೆ ಭರವಸೆಗಳನ್ನು ನೀಡಿದ್ದ ಮಂಡ್ಯ ಸಂಸದೆ ಸುಮಲತಾ ಈಗ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ. ನನ್ನ ಕೈಯಲ್ಲಿ ಏನೂ ಇಲ್ಲ ಕೇವಲ ಸಂಸದರಿಂದ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲವೂ ರಾಜ್ಯ ಸರ್ಕಾರದ ಕೈಯಲ್ಲಿದೆ ಎನ್ನುವ ಮೂಲಕ ಅಧಿಕೃತ ಸಂಸದೆಯಾದ ಮೊದಲ ದಿನವೇ ಅಭಿವೃದ್ಧಿ ಚೆಂಡನ್ನು ರಾಜ್ಯ ಸರ್ಕಾರದ ಅಂಗಳಕ್ಕೆ ಎಸೆದಿದ್ದಾರೆ.

ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಸುಮಲತಾ, ಮೊದಲ ಬಾರಿಗೆ ಸಂಸದೆಯಾಗಿರುವುದರಿಂದ ಕಲಿಯುವುದು ಸಾಕಷ್ಟಿದೆ. ಸಂಸತ್ ಕಲಾಪಗಳ ಪ್ರಕ್ರಿಯೆ ಅರಿತು ಕೆಲಸ ಮಾಡುತ್ತೇನೆ. ಬಿಜೆಪಿಗೆ ಬೆಂಬಲ ನನಗೆ ಸಕಾರಾತ್ಮಕವಾಗಿದ್ದು ಮಂಡ್ಯ ಕ್ಷೇತ್ರದ ಬೆಳವಣಿಗೆಗೆ ಅದು ಸಹಕಾರಿಯಾಗಲಿದೆ. ಕೇಂದ್ರ ಸಚಿವ ಸದಾನಂದಗೌಡರ ಜೊತೆ ಮಾತುಕತೆ ನಡೆಸಿದ್ದು ಅವರು ಜಿಲ್ಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿ ನೀಡುವಂತೆ ಹೇಳಿದ್ದಾರೆ.

ಚುನಾವಣೆ ಕಳೆದು ಹೋಗಿದೆ. ಮಂಡ್ಯದ ಶಾಸಕರು ದ್ವೇಷದ ರಾಜಕೀಯ ಬಿಟ್ಟು ಬಿಡಬೇಕು ಮಂಡ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಮಂಡ್ಯದ ಸಂಸದೆಯಾಗಿ ನಾನು ಕೇಂದ್ರದಿಂದ ಸಾಧ್ಯವಾಗುವ ಕೆಲಸಗಳನ್ನು ಮಾಡುತ್ತೇನೆ. ಅಲ್ಲದೆ ಕಾವೇರಿ ನದಿ ನೀರು ಹಂಚಿಕೆ ವ್ಯಾಜ್ಯದಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಕೋರ್ಟ್ ವ್ಯಾಪ್ತಿಯಲ್ಲಿ ಪ್ರಕರಣ ಇರುವುದರಿಂದ ರಾಜ್ಯ ಸರ್ಕಾರವೇ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳುವ ಮೂಲಕ ಸುಮಲತಾ ಅವರು ಜವಾಬ್ದಾರಿಯಿಂದ ಜಾರಿಕೊಂಡಿದ್ದಾರೆ.

ಪಾರ್ಲಿಮೆಂಟ್ ನಂಗೆ ಹೊಸತು, ಮೊದ ಮೊದಲು ಶಾಲೆಗೆ ಹೋದಂತೆ ಭಾಸವಾಗ್ತಿದೆ. ಸಂಸತ್ ಕಾರ್ಯ ವೈಖರಿ ತಿಳಿದುಕೊಂಡು ಕೆಲಸ ಮಾಡಬೇಕಿದೆ. ಬಿಜೆಪಿ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ರಸ್ತೆ, ಕುಡಿಯುವ ನೀರಿನ ವಿಚಾರಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇನೆ. ಅಲ್ಲದೆ ಕಬ್ಬಿಗೆ ಬರಬೇಕಿರುವ ಬೆಂಬಲ ಬೆಲೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಸಂಸದೆಯಾದ ಮೊದಲ ದಿನವೇ ಸುಮಲತಾ ಆಡಿರುವ ಮಾತುಗಳು, ಚುನಾವಣಾ ಪ್ರಚಾರದ ಮಾತುಗಳಿಗೆ ಹೋಲಿಸಿಕೊಂಡರೆ ಸಾಕಷ್ಟು ವ್ಯತ್ಯಾಸವಾದಂತೆ ಕಾಣುತ್ತಿದ್ದು ಮುಂದೆ ಸುಮಲತಾ ಸಂಸತ್ ನಲ್ಲಿ ಏನು ಮಾತನಾಡಿಲಿದ್ದಾರೆ ಕಾದು ನೋಡಬೇಕು.

Leave a Reply

Top